ಕತ್ತರಿಹುಳುಗಳು : ಕೀಟವರ್ಗದ ಲೆಪಿಡಾಪ್ಟಿರ ಗಣದ ಪ್ಯಾಲಿನಿಡೀ ಮತ್ತು ನಾಕ್ಟುಯಿಡೀ ಕುಟುಂಬಕ್ಕೆ ಸೇರಿದ ಪತಂಗಗಳ ಡಿಂಭಗಳು (ಕಟ್ವಮ್ರ್ಸ್‌). ಕೆಲವು ಬೆಳೆಗಳ ಸಸಿಗಳನ್ನು ಕತ್ತರಿಸಿ ತುಂಡುಮಾಡಿ ನಾಶಪಡಿಸುವುದರಿಂದ ಇವಕ್ಕೆ ಈ ಹೆಸರು. ಇವು ಉರುಳೆಯಾಕಾರದವು. ನುಣುಪಾದ ಮೈಯುಳ್ಳವು. ಅವುಗಳ ಬಣ್ಣ ಮಣ್ಣಿನಂತೆಯೇ, ಸಾಮಾನ್ಯವಾಗಿ ಇವುಗಳಲ್ಲೆಲ್ಲ 5 ಜೊತೆ ಮುಂಗಾಲುಗಳಿವೆ (ಪ್ರೋ ಲೆಗ್ಸ್‌).
ಹಗಲಿನಲ್ಲಿ ಹೆಂಟೆ, ಕಲ್ಲು ಮತ್ತು ಹುಡಿಮಣ್ಣಿನ ಕೆಳಗೆ ಅಡಗಿಕೊಂಡಿದ್ದು ರಾತ್ರಿವೇಳೆ ತಮ್ಮ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗುತ್ತದೆ. ಒಟ್ಲು ಪಾತಿಗಳಿಗೆ ಇವುಗಳಿಂದ ತೊಂದರೆ ಹೆಚ್ಚು. ಇವು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಗುಂಪು ಗುಂಪಾಗಿ ಹೊಲದಿಂದ ಹೊಲಕ್ಕೆ ಸಾಗಿ ಸಾಕಷ್ಟು ನಷ್ಟ ಉಂಟುಮಾಡುತ್ತವೆ. ಇವು ಗಿಡಗಳ ಎಲೆ, ಬೇರು, ಕಾಂಡ ಮುಂತಾದುವನ್ನು ಕತ್ತರಿಸುವುದು ಸಾಮಾನ್ಯವಾದರೂ ಕೆಲವು ಬಗೆಯವು ಹಣ್ಣು ಮತ್ತು ಮರಗಳನ್ನು ಕೊರೆಯುವುದೂ ಉಂಟು. ಕೆಲವಂತೂ ಕೃಷಿ ಬೆಳೆಗಳಿಗೆ ತೀವ್ರ ಹಾನಿಯುಂಟು ಮಾಡುವ ಪಿಡುಗುಗಳಾಗಿವೆ. ಉದಾಹರಣೆಗೆ ಹೊಗೆಸೊಪ್ಪಿನ ಹುಳು (ಪ್ರೋಡೀನಿಯ), ರಾಗಿಯ ಹುಳು (ಲ್ಯಾಫಿಗ್ಮ), ದಂಡುಹುಳು (ಸಿರ್ಫಿಸ್), ಅಲೂಗಡ್ಡೆಯ ಕತ್ತರಿಹುಳು (ಯುಕ್ಸೋವ) ಮತ್ತು ಬತ್ತದ ಮುತ್ತುವ ಹುಳು (ಸ್ಟೋಡಾಪ್ಟಿರ) ಇವಲ್ಲದೆ ಕೋಸು, ಮೆಣಸಿನಕಾಯಿ, ಈರುಳ್ಳಿ, ಬದನೆ ಮುಂತಾದ ಬೆಳೆಗಳಿಗೆ ಹತ್ತುವ ಕತ್ತರಿಹುಳುಗಳೂ ಉಂಟು.

ವಿಷ ಬೆರೆತ ಆಕರ್ಷಕ ಆಹಾರವನ್ನು (ಬೇಯ್ಟ್‌) ನೆಲದಲ್ಲಿ ಹರಡಿ ಅವು ಸಾಯುವಂತೆ ಮಾಡುವುದೊಂದೇ ಇವುಗಳ ನಿವಾರಣೆಯ ಪರಿಣಾಮಕಾರಿ ಮಾರ್ಗ.
(ಡಿ.ಎಸ್.; ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ